ಮಿಂಟೊ - ಮಾರ್ಲೆ ಸುಧಾರಣೆಗಳು

 	ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅರ್ಹರಾದ ಭಾರತೀಯರಿಗೆ ಅವಕಾಶ ಮಾಡಿಕೊಟ್ಟ ಸುಧಾರಣೆಗಳು. ಇವನ್ನು ರೂಪಿಸಿದವರು 1905-10ರ ತನಕ ಭಾರತದ ವೈಸರಾಯ್ ಮತ್ತು ಗವರ್ನರ್ ಆಗಿದ್ದ ಅರ್ಲ್ 11, ಮಿಂಟೊ(1845-1914) ಮತ್ತು ಭಾರತಕ್ಕೆ ರಾಜ್ಯಕಾರ್ಯದರ್ಶಿಯಾಗಿದ್ದ ಜಾನ್ ಮಾರ್ಲೆ (1830-1923). ಗವರ್ನರ್ ಜನರಲ್ ಕಾರ್ಯಕಾರಿ ಮಂಡಳಿಯ ಸ್ಥಾನವೊಂದು ಭಾರತೀಯ ಸದಸ್ಯನೊಬ್ಬನಿಗೆ ಮೀಸಲಾಗಿತ್ತು. ಮದರಾಸು ಮತ್ತು ಮುಂಬಯಿ ಗವರ್ನರುಗಳ ಕಾರ್ಯಕಾರಿ ಕೌನ್ಸಿಲುಗಳ ಸದಸ್ಯರ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಲಾಯಿತು. ಬಂಗಾಲದಲ್ಲಿ ಕಾರ್ಯಕಾರಿ ಕೌನ್ಸಿಲನ್ನು ಜಾರಿಗೆ ತರಲಾಯಿತು (1909). ಬಿಹಾರ್ ಮತ್ತು ಓರಿಸ್ಸ ರಾಜ್ಯಗಳನ್ನು ಪ್ರತ್ಯೇಕ ಪ್ರಾಂತಗಳನ್ನಾಗಿ ವಿಂಗಡಿಸಿದಾಗ ಕಾರ್ಯಕಾರಿ ಕೌನ್ಸಿಲನ್ನು ಆ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲಾಯಿತು. (1912). ಪ್ರಾಂತೀಯ ಮಂಡಳಿಗಳಲ್ಲಿ ಭಾರತೀಯರನ್ನು ನೇಮಿಸುವ ಬಗ್ಗೆ 1909ರ ಕಾಯಿದೆಯಲ್ಲಿ ನಿರ್ದಿಷ್ಟವಾಗಿ ಅವಕಾಶ ಮಾಡಿಕೊಡದಿದ್ದರೂ ಅವುಗಳಲ್ಲಿ ಭಾರತೀಯರನ್ನು ನೇಮಕ ಮಾಡುವ ಪದ್ಧತಿ ಕಾರ್ಯರೂಪದಲ್ಲಿತ್ತು ಎಂಬುದು ಮಹತ್ತ್ವದ ಸಂಗತಿ.

	ಲೆಜೆಸ್ಲೇಟಿವ್ ಕೌನ್ಸಿಲುಗಳ ಸಂಘಟನೆ ಮತ್ತು ಕಾರ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದುದು 1909ರ ಕಾಯಿದೆಯ ಪ್ರಮುಖ ಅಂಶ. ಕೇಂದ್ರ ನ್ಯಾಯ ವಿಧಾಯಕ ಸಭೆಯ ಸದಸ್ಯರ ಹದಿನಾರರಿಂದ ಅರವತ್ತಕ್ಕೆ ಹೆಚ್ಚಿಸಲಾಯಿತು. ಸದಸ್ಯರ ಪೈಕಿ ಇಪ್ಪತ್ತೆಂಟಕ್ಕಿಂತ ಹೆಚ್ಚಿಲ್ಲದಂತೆ ಅಧಿಕಾರಿಗಳಿರಬೇಕಾಗಿತ್ತು. ನಿಗದಿಪಡಿಸಿದ ಕೆಲವು ಜನಾಂಗಗಳನ್ನು ಪ್ರತಿನಿಧಿಸಲು ಮೂವರು ಅಧಿಕಾರೇತರ ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರ ಗವರ್ನರ್ ಜನರಲ್‍ನಿಗೆ ಇತ್ತು. ಅಲ್ಲದೆ ಎರಡು ಸ್ಥಾನಗಳನ್ನು ನಾಮಕರಣದಿಂದ ಭರ್ತಿಮಾಡುವ ಅಧಿಕಾರವೂ ಅವನಿಗಿತ್ತು. ಉಳಿದ ಇಪ್ಪತ್ತೇಳು ಸ್ಥಾನಗಳನ್ನು ಅಧಿಕಾರೇತರ ಚುನಾಯಿತ ಸದಸ್ಯರಿಂದ ಭರ್ತಿಮಾಡಲಾಗುತ್ತಿತ್ತು. ಈ ಸದಸ್ಯರ ಪೈಕಿ ಕೆಲವರು ವಿಶೇಷ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಇತರ ಸದಸ್ಯರನ್ನು ಒಂಬತ್ತು ಪ್ರಾಂತೀಯ ಲೆಜಿಸ್ಲೇಟಿವ್ ಕೌನ್ಸಿಲಿನ ಅಧಿಕಾರೇತರ ಸದಸ್ಯರಿಂದ ಆಯ್ಕೆ ನಡೆಸಬೇಕಾಗಿತ್ತು. ಆದುದರಿಂದ ಕೇಂದ್ರ ಲೆಜಿಸ್ಲೇಟಿವ್ ಕೌನ್ಸಿಲಿನಲ್ಲಿ ಅಧಿಕಾರ ಬಹುಮತವನ್ನು ಉಳಿಸಿಕೊಳ್ಳಲಾಗುತ್ತಿತ್ತು. ಜನರಲ್ ಕೌನ್ಸಿಲಿನ ಬಗ್ಗೆ ಮಾರ್ಲೆ ತಳದಿದ್ದ ಅಭಿಪ್ರಾಯವಿದು: ಇದು ತನ್ನ ಶಾಸಕ ಹಾಗೂ ಕಾರ್ಯಾಂಗದ ಲಕ್ಷಣಗಳಲ್ಲಿ ಬದ್ಧವಾಗಿರುವ ಸಂವಿಧಾನಾತ್ಮಕ ಹೊಣೆಗಳಿಗೆ ನಿಯತವಾಗಿ ಮತ್ತು ಅಡೆತಡೆಗಳಿಲ್ಲದಂತೆ ರಚನೆಗೊಳ್ಳಬೇಕು. ಚಕ್ರವರ್ತಿಯ ಸರ್ಕಾರಕ್ಕೆ ಹಾಗೂ ಗ್ರೇಟ್ ಬ್ರಿಟನ್ನಿನ ಪಾರ್ಲಿಮೆಂಟಿಗೆ ಬದ್ಧವಾಗಿರಬೇಕು.

	ಪ್ರಾಂತೀಯ ಲೆಜಿಸ್ಲೇಟಿವ್ ಕೌನ್ಸಿಲ್‍ಗಳಲ್ಲಿ ಹೆಚ್ಚಿನ ಸದಸ್ಯರ ಸಂಖ್ಯೆಯನ್ನು ಪ್ರಧಾನ ಪ್ರಾಂತಗಳಲ್ಲಿ ಐವತ್ತಕ್ಕೆ ಹೆಚ್ಚಿಸಲಾಯಿತು. ಬಹುಮತವನ್ನು ಒಳಗೊಂಡಿದ್ದ ಬಂಗಾಲವನ್ನು ಬಿಟ್ಟು ಉಳಿದ ಕಡೆಗಳಲ್ಲೆಲ್ಲ ಅಧಿಕಾರಿ ಹಾಗೂ ನಾಮಕರಣಗೊಂಡ ಅಧಿಕಾರೇತರ ಸದಸ್ಯರ ಸಂಖ್ಯೆ. ಚುನಾಯಿತ ಸದಸ್ಯರಿಗಿಂತ ಹೆಚ್ಚಿನ ಬಹುಮತ ಪಡೆದಿರುವಂತೆ ವ್ಯವಸ್ಥೆಗೊಳಿಸಲಾಗುತ್ತಿತ್ತು. ಈ ಹೆಚ್ಚಿನ ಅಧಿಕಾರೇತರ ಸದಸ್ಯರ ಪೈಕಿ ಹಲವರನ್ನು ಸ್ಥಳೀಯ ಸಂಸ್ಥೆಗಳು. ವರ್ತಕ ಸಂಘಗಳು ಮತ್ತು ವಿಶ್ವವಿದ್ಯಾಲಯಗಳು ಆಯ್ಕೆಮಾಡುತ್ತಿದ್ದವು. ಮುಸ್ಲಿಮ್ ಜನರಿಗೆ ಪ್ರತ್ಯೇಕ ಪ್ರಾತಿನಿಧ್ಯ ಇರಬೇಕೆಂಬ ಬೇಡಿಕೆಯನ್ನು ಸಮ್ಮತಿಸುವಲ್ಲಿ ವರ್ಗಜಾತಿ ಪ್ರಾತಿನಿಧ್ಯದ ನಿಯಮವನ್ನು 1909ರ ಸುಧಾರಣೆಗಳು ಜಾರಿಗೆ ತಂದವು.

	ಮಿಂಟೊ-ಮಾರ್ಲೆ ಸುಧಾರಣೆಗಳು ಪ್ರಾತಿನಿಧಿಕ ಸರ್ಕಾರವನ್ನು ಜಾರಿಗೆ ತರುವಲ್ಲಿ ಒಂದು ಪ್ರಮುಖ ಘಟ್ಟವಾದರೂ ಅವು ಭಾರತಕ್ಕೆ ಪಾರ್ಲಿಮೆಂಟರಿ ಸರ್ಕಾರವನ್ನು ಕೊಡಲಿಲ್ಲ. ವಾಸ್ತವವಾಗಿ ಭಾರತೀಯ ಪಾರ್ಲಿಮೆಂಟರಿ ಸರ್ಕಾರವನ್ನು ಕೊಡಲಿಲ್ಲ. ವಾಸ್ತವವಾಗಿ ಭಾರತೀಯ ಆಡಳಿತ ವೈಟ್‍ಹಾಲ್ಗೆ ಅನುಗುಣವಾಗಿಯೇ ನಡೆಯುತ್ತಿತ್ತು. ಅಧಿಕಾರೇತರ ಸದಸ್ಯರು ಹೊಣೆಗಾರಿಕೆಯಿಂದ ವರ್ತಿಸುವಂತಿಲ್ಲ. ಆ ಸದಸ್ಯರು ಹೇಳುವ ಯಾವುದೇ ವಿಷಯ ಸರ್ಕಾರದ ಮೂಲಭೂತ ನೀತಿಯಲ್ಲಿ ಯಾವ ಬಗೆಯ ಮಾರ್ಪಾಟನ್ನೂ ಮಾಡುತ್ತಿರಲಿಲ್ಲ. ಪರೋಕ್ಷ ಚುನಾವಣೆ ಮತ್ತು ಪ್ರತ್ಯೇಕ ವರ್ಗ-ಜಾತಿ ಪ್ರಾತಿನಿಧ್ಯಗಳಿಂದಲೂ ಅನೇಕ ಬಗೆಯ ಅಡಚಣೆಗಳಿದ್ದುವು. ಆದುದರಿಂದ ಈ ಸುಧಾರಣೆಗಳು ಭಾರತೀಯ ಜನತೆಯ ನಿರೀಕ್ಷೆಯ ಮಟ್ಟಕ್ಕೇರಲಿಲ್ಲ.			
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ